Sunday, October 16, 2011

ಯಾರು ನೀನು....!!!?



ಒಮ್ಮೆಯಾದರೂ ನೋಡಿದೀಯಾ
ಯಾಕೆ ಎಂದು ಕೇಳಿದೀಯಾ
ನಿನ್ನ ಹೃದಯದಿ ಹರಿವ ಒಂದು ಭಾವವ....
ಕಾಡಿ ಕಾಡಿ ಮೂಡೋ ಒಂದು ಉಧ್ಗಾರವ..

ಯಾರು ನೀನು....!!?
ಹ್ಞಾ....
ಏಕೆ ಹೀಗೆ
ಏನು ಹಾಗೆ
ಕನ್ನಡೀಲಿ ಕಣ್ಣ ಕಂಬನಿ ಹೊಳೆದ ಹಾಗೆ..
ಕೇಳಿದಾಗ ಏನೋ ಒಂದು ನುಡಿದ ಹಾಗೆ..
ಯಾರು ನೀನು....!!
ಕೇಳಿಲ್ಲಿ.....
ಒಮ್ಮೆ ನೀನು ಕೇಳು ನಿನ್ನಯ ಹೃದಯದಲ್ಲಿರೋ ಸತ್ಯವ...
ನೀನು ಏಕೆ ಹೀಗೆ ಆದೆ ಎಲ್ಲಿ ಹೋಯಿತು ಭಾವನೆ...
ಭಾವವೆಲ್ಲ ಮಾಸಿಹೋಗಲು ನೀನು ಏಕೆ ಇಲ್ಲಿಹೆ....

ಆಸೆಯೆಂಬ ನಶೆಯಲಿರಲು, ಸೋಲು ಕಂಡರೆ ದ್ವೇಷವೇ..?
ಗೆಲುವೇ ಬೇಕು ಎಂದು ನುಡಿವ, ಮನಕೆ ಸೋಲು ಪಾಠವು...
ಬಿದ್ದ ನಂತರ ಕಲಿತ ಪಾಠವ ಎದ್ದು ನಿಂತು, ನಿದ್ದೆಗೆಟ್ಟು ಮರೆಯಬೇಡ...

ಕೇಳುವುದಿಲ್ಲವೇಕೆ ನಿನಗೆ ಪಕ್ಕದಲ್ಲಿರೋ, ಮನದ ಮಾತು..
ಏಕೆ ಹೀಗೆ ಕಿವುಡನಾದೆ, ನಾದ ಕೇಳದೇ ದೂರ್ತನಾದೆ..
ಮನದ ಮಮತೆಯು ತಿಪ್ಪೆಯಲ್ಲಿ, ಎಲ್ಲಿ ಹೋಯಿತು ನಿನ್ನ ತನವು ?...
ಜನರ ಹೃದಯ ಕೊಳಚೆಯೇಕೆ, ಹುಳುವು ಹುಟ್ಟಿ ಕೆಡಿಸಲು..

ಕಾಡೊದಿಲ್ಲವೇ? ಒಮ್ಮೆಯಾದರೂ.....
ಏಕೆ ನೀನು ಹೀಗೆಯೆಂದು..?

ಕನಸ ಕಟ್ಟಿ ಗೂಡ ಹೆಣೆದು...
ಎಲ್ಲಿ ಹೋದೆ ಹಾರಿ ದೂರ.
ತಡೆವೆ ಏಕೆ ಹರಿವ ನದಿಯ...
ಕಟ್ಟಲೇಕೆ ಗೋಡೆಯ.
ಏಕೆ ಬಯಸುವೆ ಸುಖವ ಮಾತ್ರವೇ...
ಸಾರವಿಲ್ಲದ ಹಿಂಡಿದಂಥ ಹಣ್ಣಿನಂತೆ.
ರುಚಿಯ ಅಡುಗೆಯು ಸಿಗುವುದಾಗ...
ಹುಳಿಯು ಕಹಿಯು ಸಿಹಿಯು ಎಲ್ಲ ಇರಲು ಸವಿಯಲು.
ಇದುವೇ ಜೀವನ.. ಗಾಳಿಯಂತೆ ಬೀಸಲೀಗ...
ಬಯಸಲೇಕೆ ನಿಯಂತ್ರಿಸಲು.
ಅದರ ಪಾಡಿಗೆ ಹರಿಯ ಬಿಡಲು...
ತಂಪು ನಿನ್ನದು ಎಂದಿಗೂ.
ಏಕೆ ನೀನು ಇಲ್ಲಿ ಬಂದಿಹೆ.. ಏನು ಸಾಧಿಸ ಹೊರಟಿಹೆ......

ಕಣ್ಣ ಬಿಂಬದಲ್ಲಿ ಕಾಣೋ ಬಿಂಬ
-ದಂತೆ ಮನದ ಪ್ರಶ್ನೆಯು...
ಯಾರು ನೀನು ಎಂದು ಕೇಳಿಕೋ...
ನಿನ್ನ ಹೃದಯವ ತೆರೆದು ಇಟ್ಟುಕೋ...
ಸ್ವಚ್ಛವಾದ ಭಾವವೆಂಬ ದೇವರಲಿ.
ಪುಟ್ಟ ಮಗುವ ನಗುವಿನಂತೆ
ಚಿಗುರು ಒಡೆದ ಬಳ್ಳಿಯಂತೆ
ಹೂವಾಗ ಹೊರಟ ಮೊಗ್ಗಿನಂತೆ
ಮುಗ್ಧವಾದ ಮಗುವ ಮನದಲಿ ಮೂಡೋ ಆ ಮೌನದಂತೆ...
ಏಕೆ ಇನ್ನು ಮುಸುಕು ನಿನಗೆ.....
ಹಕ್ಕಿಯಂತೆ ಹಾರಬಯಸಲು.
ಹೃದಯವಾಗ ನಗುವುದೀಗ ನಿನ್ನ
ಆ ಹುಚ್ಚಾಟಕೆ...
ನಿನ್ನ ಆ ಹೆಬ್ಬಯಕೆಗೆ...
ನಿನ್ನ ಪೆದ್ದು ಯೋಚನೆಗೆ...
ಯಾರು ನೀನು......!! ಎಂದು ಕೇಳಿಕೋ...
ಒಮ್ಮೆ ನೀನು.........
ಏಕೆ ಬಂದಿಹೆ ಎಂದು ಕೇಳಿಕೋ
ಯಾರು ನೀನು.....!! ಯಾರು ನೀನು.....!!

---------ರಘುರಾಮ್ ಜೋಶಿ---------

Thursday, July 21, 2011

ನೋಡಿಕೋಳ್ತಿಯಾ... ನನ್ನ ಹೃದಯವ!!......


ನನ್ನ ಮನಸು ಎಲ್ಲೊ ಇದೆ..
ಮನಸ ಮಾತು ಇನ್ನೊಂದಿದೆ...
ಸ್ವಲ್ಪ ಕೇಳು ನೀ ಇಲ್ಲಿಯೇ...
ಸ್ವಲ್ಪ ಜಾಸ್ತಿ ಆಗಿಲ್ಲವೇ...
ಕನಸ ಬಿಟ್ಟು ಹಾರಿ ಹೋಗಿದೆ..
ನನ್ನ ಹೃದಯದಲೀಗ ಜ್ವಾಲೆ ಹೊತ್ತಿದೆ ||

ಈ ಪ್ರೀತಿಯು ಕಣ್ಣಂಚಲ್ಲಿ ಕಣ್ಣ ಹನಿಯಾಗಿ ಬಿದ್ದಂತಿದೆ...
ನನ್ನ ಕನಸಲ್ಲಿ, ಆ ರಾತ್ರೀಲಿ ನಿನ್ನ ಬಿಂಬ ನೀರಲ್ಲಿ ಮುದ್ದಾಗಿ ಕಂಡಂತಿದೆ...
ಒಂದು ಮೌನ ಬರೆದ ಸಿಹಿಯಾದ ಪ್ರೇಮ ಬೆಳದಿಂಗಳಾ ಬೆಳಕಲಿ ತಂಪಾದ ಗಾನ..
ಹಸಿರಿನೆಲೆಯ ಮೇಲೆ ನಿದ್ರಿಸಿರುವ ಆ ಪುಟ್ಟ ನೀರ ಹನಿಗಳೇನಾ ನೀ..

ಕೆಸುವಿನೆಲೆಯ ಮೇಲೆ ಆಡ್ವಾ ಹನಿಗಳೇನಾ ನೀ ...
ಬೆಳಕಿನಾ ಕಿರಣ ನಾನಾಗಲು...

ಗರಿಯ ಕೆದರಿ ಕರೆವ ನಾನು ಬರವ ಕಳೆವ ಮೋಡದಂತೆ,
ಮುತ್ತನೀವ ದೇವತೆಯಾ ನೀ....ಆ ಅದ್ಭುತ ಸೌಂದರ್ಯವೇನಾ ನೀ....

ಬಿಡಲಾರೆ ಉಸಿರಾ ಸನಿಹಾನೆ ಸುಳಿವ ಸುಳಿಗಾಳಿಯಾಗಿ ,
ನೀ ಸ್ಪೂರ್ತಿಯಾಗುವವರೆಗೆ ....ಬಿಡಲಾರೆ ಉಸಿರಾ ||

ಹಸಿವನ್ನೇ ಸವಿವಾ ಮನಸಿಗೆ ಸಿಗುವಾ,
ನೋವ ಮರೆಸಿ ನಗಿಸಿ ಕುಣಿಸೋ ಮಳೆಯಾಗಬಾರದಾ......ನಿನಗೊಮ್ಮೆ ಮನಸಾಗಬಾರದಾ....

ವೀಣೆ ನುಡಿಸೋ ತಂತಿಯಾಗಿ ಸ್ವರದ ದನಿಯ ಕೇಳಿ ಬರುವ
ಖುಷಿಯ ಅಲೆಗಳಂತೆ ನಾವಿಬ್ಬರಾಗಬಾರದೆಕೇ...........ನೀ ಸ್ವಲ್ಪ ಕೇಳಬಾರದೇಕೆ.....

ಕಣ್ಣ ರೆಪ್ಪೆಯ ಕಷ್ಟ ಕಂಡು ಕಣ್ಣ ಕಂಬನಿ ಒರೆಸಲೆಂದು
ಕೈಯನಿತ್ತ ಹೃದಯ ನನ್ನದು...

ಸರಿಯಾಗಿ ನೊಡಿಕೋಳ್ತಿಯಾ ಈ ಎನ್ನ ಹೃದಯವ!!..... || ||


---ರಘುರಾಮ್ ಜೋಶಿ---


ಕೊನೆಯ ತನಕ....


ಎಲ್ಲೆಲ್ಲೂ ಪ್ರೇಮ..ನುಡಿದಿದೆ ಈ ಹೃದಯ ಜಗವ ನೋಡಿ...
ಎನ್ನ ಕಾಲು ನಿಲ್ಲುತಿಲ್ಲ...
ನಿಲ್ಲು ಎಂದರೂ ಕೇಳುತಿಲ್ಲ...

ಚಿಟ್ಟೆ ಹಾಗೆ ರೆಕ್ಕೆ ಬಲಿತು ಚಿಟಿಪಿಟಿ ಎಂದು ಹಾರಿ
ಸಾವಿರಾರು ರಂಗು ಚೆಲ್ಲಿ ಜಗಕೆ ಹರಡಿಹುದು....ಜಗವ ತಿರುಗಿಹುದು...
ಇದು ಪ್ರೇಮ... ಇದುವೇ ಪ್ರೇಮ....

ಕಡಲಲೆಯ ರಸಬಡಿತಗಳ ಬಹುದಾನಂದ..... ಆ ದಡಕಲ್ಲವೇ....
ಮರಗಿಡದ ಹೂವುಹಣ್ಣುಗಳ ಆ ಸಿಹಿಒಲವು ..... ಜೀವನಾಡಿಯದಲ್ಲವೆ....
ಸಿರಿತನದ ತೊರೆನದಿಗಳಂತೆ ಸಾಗರವ ಸೇರಿಹುದು...

ನೋಟದಲೆ ಸ್ವಲ್ಪ ಮಾತಾಡಿ...
ಹರಿದಾಡುವಾ.. ಮನವ ಹಿಡಿದೆಳೆವ
ವರವಾಗಿ ಕಣ್ಣಲ್ಲಿ ಕನಸಾಗಿ ...ದಿನವಿಡೀ ನಿದ್ದೆಯೇಲ್ಲಿ...
ನಿದ್ದೆ ಕದ್ದ ಚೊರನೇಲ್ಲಿ?...

ಜ್ವರವಿರಲು ಇದು ಜೊತೆಗಿರಲು ..
ಯಾರು ಏನೆಂದರೂ ಕೇಳುವುದಿಲ್ಲವೋ....

ತರಗೆಲೆಯಾ ಹಾಗೆ ಉದುರಿದರೂ..
ಚಿಗುರೆಲೆಯಲಿ ಹೊಸ ನಾಂದಿಯಾಗಿಲ್ಲವೇ ....ಇದು ಕರಗುವುದಲ್ಲವೋ..

ಸಿಗದಿರಲು.. ಒಂದಾಗದಿದ್ದರೂ ಇದು ಕೊರಗುತ ...ಕುರುವುದಿಲ್ಲವೋ..

ಇರುವರೆಗೂ ಕೊನೆ ಉಸಿರಿರಲು ಅದು ..
ನಗುನಗಲು ಸಾವೇ ಹೆದರಿಹುದೇ....

ಯಾರ್‍ಯಾರೋ ಎಲ್ಲೆಲ್ಲೋ ಸಿಕ್ಕಿರಲು ...
ಮತ್ತೆಲ್ಲೊ.. ಇನ್ನೆಲ್ಲೊ.. ಕಳೆದಿರಲು...
ಮುಂದೆಲ್ಲೊ ಕಾಯ್ದಿಡುವ ಸಿಹಿಯಾ ನೆನಪುಗಳಿದು...
ಮರೆಯಬೇಡವೆ... ||

ಇದು ಪ್ರೇಮ ...ಸಾವೇ ಇರದ...
ಕಡಲೊಳಗಡೆ ಕಾಣೋ ನೀಲಿ ಬಣ್ಣ!..

ಬಾನು ಬಾಗೋ ಭುವಿಯ ತಾಗೋ..
ಆ ತುದಿಯ.... ಕೊನೆಯ ಹಾಗೇ..

ಇದುವೇ...
ಮಳೆಯಹನಿಯು ಭುವಿಯಲರಳಿ ಪುಟ್ಟ ಹೆಜ್ಜೆ ಇಟ್ಟು ನಡೆಯೋ... ಕ್ಷಣದ ಹಾಗೇ....

ಇದುವೇ...
ಮನದ ಹೃದಯದಿ ಗೆಜ್ಜೆ ಕಟ್ಟಿ ...
ಕುಣಿದು ತಾಳದಿ ನಲಿವ ಬಣ್ಣದಿ..
ತಂಪು ಗಾಳಿ ಕಂಪ ಸೂಸಿ.. ಬಣ್ಣವೆಲ್ಲ ಜಗದಿ ಹರಡಲು...
ಇದು ಕೊನೆಯಿರದಾ ಪ್ರೇಮ...

ಇದುವೆ.. ಕೊನೆತನಕ ಪ್ರೀತಿಸೊ ಪ್ರೇಮ || ||


---ರಘುರಾಮ್ ಜೋಶಿ---

Sunday, July 17, 2011

ಹೇಗೆತಾನೆ.. ಮರೆಯಲಿ!!


ನೆನಪಿದೆಯಾ...
ಊರೆಲ್ಲಾ ತಿರುಗಿದ ಆ ದಿನ ..
ಹೇಗಿತ್ತು?....
ಕದ್ದು ತಿನ್ನುತಿದ್ದ ಮಾವಿನ ರುಚಿ..
ಸುಂದರವಾಗಿತ್ತಲ್ವ......!
ಗೊಮ್ಮಟೇಶ್ವರನ ಅವತಾರದಲ್ಲಿ ಮನೆಯಲ್ಲೆಲ್ಲಾ ಓಡಾಡಿದ್ದು...?
ನೆನಪಾಯಿತಾ...
ಊಟ ಬೇಡವೆಂದು ಹಠ ಮಾಡಿದಾಗ ..ಅಮ್ಮ ನಿಸರ್ಗವನ್ನ ತೋರಿಸಿ ಊಟ ಮಾಡಿಸಿದ್ದು....
ನೆನಪಿದೆಯಾ......
ಕತ್ತಿ,ಕೊಡಲಿ ಹಿಡಿದು ಅಜ್ಜನೊಟ್ಟಿಗೆ ತೋಟ ಸುತ್ತಿದ್ದು....
ನೆನಪಿದೆಯಾ......
ಅಪ್ಪನ ಹತ್ತಿರ ಹೊಡೆತ ತಿಂದು ಕಲಿತ ಆ ಗಣಿತದ ಲೆಕ್ಕ.....
ನೆನಪಿದೆಯಾ......
ಅಕ್ಕಳ ಜೊತೆ ಹೊಡೆದಾಡಿದ ಆ ಕ್ಷಣ...
ನೆನಪಿದ್ದಾರಾ......
ನಿನ್ನನ್ನು ತಿದ್ದಿದ ಆ ನಿನ್ನ ಪ್ರೀತಿಯ ಗುರುಗಳು...
ನೆನಪಿದೆಯಾ......
ಮಳೆಗಾಲದ ಚಳ್ಳೆಹಣ್ಣು, ಬೆಸಿಗೆಯ ಕೌಳಿಕಾಯಿ.... ಮತ್ತೆ... ಆ ನೀಲಿ ನೆರಳೆಹಣ್ಣು,ಸಂಪಿಗೆ ಹಣ್ಣು...?
ನೆನಪಿದೆಯಾ...
ಜೇನು ಕಚ್ಚಿಸಿಕೊಂಡು ಓಡಿಬಂದ್ದಿದ್ದು....

ಕನಸು ಕಾಣಲು ಕಲಿತಿದ್ದು ಅಲ್ಲಿ...
ಕನಸು ಕಾಣಲು ಶುರುಮಾಡಿದ್ದು ಅಲ್ಲಿ.....
ಮನಸ್ಸು ಗರಿಗೆದರಿ ಹಾರಿದ್ದು ಅಲ್ಲಿ.....
ಅಳುತ್ತಾ ಅಳುತ್ತಾ, ನಗುತ್ತಾ ನಗುತ್ತಾ...
ಕುಣಿದಾಡಿದ್ದು ಅಲ್ಲಿ...
ಮನದ ಮಳೆಗಾಲದ ಹನಿಗಳಲಿ ಆಟ ಆಡಿದ್ದು ಅಲ್ಲಿ....
ಜೀವನದ ಅರ್ಥವನ್ನ ತಿಳಿದಿದ್ದು ಅಲ್ಲಿ....
ವ್ಯಕ್ತಿಗಳ ಗುರುತು, ಗುಣ ತಿಳಿಯುವುದ ಕಲಿತಿದ್ದು ಅಲ್ಲಿ.....
ನನ್ನ ಜೀವನದ ಗುರಿಯ ಹಾದಿ
ಚಿಗುರೊಡೆದಿದ್ದು ಅಲ್ಲಿ.....
ಭಾವನೆಗಳು ಮೂಡಿದ್ದು ಅಲ್ಲಿ......
ಆ ಮರ ಗಿಡ ಬೆಟ್ಟ ಜನ ಕಾಡು ಗಾಳಿ ಬೆಳಕ ಕಂಡು ಅನುಭವಿಸಿ .......
ಆಕಾಶದೆತ್ತರಕ್ಕೆ ಹಕ್ಕಿ ಹಾಗೆ ಹಾರಿ ಹೋಗಿ ಮುಟ್ಟುವಾಸೆ ಮೂಡಿದ್ದು ಅಲ್ಲಿ....

ಜೀವನದಾ ಮಂತ್ರ ಯಂತ್ರವಾಗುತಿರುವಾಗ.....
ಮಂತ್ರ ಮಾಡಿದ ಮಾಯಾಲೋಕದಂತಿರುವ ..
ಈ ಮುಗ್ಧ ಮನಸಿನ ಮಗುವಂತಿರುವ..
ಆ ನೆನಪುಗಳ ಸುಂದರ ಬ್ರಹ್ಮಾಂಡದಂತಿರುವ ..ಈ ನನ್ನ ನೆನಪುಗಳ ಹೇಗೆ ತಾನೆ ಮರೆಯಲಿ ಹೇಳಿ....!!!!

ಕನಸಿನ ಪಚೀತಿ....


ನಿನ್ನ ಕಂಗಳಲ್ಲಿ ಚಂದ್ರನ ಬಿಂಬ ಕಂಡೆ..

ನಿನ್ನ ಕೆನ್ನೆಯಲಿ ಹಾಲಿನ ಕೆನೆಯ ಕಂಡೆ..

ನಿನ್ನ ಆ ತುಟಿಯಲಿ ಜೇನಿನ ಸಿಹಿ ಕಂಡೆ

ನಿನ್ನ ನಗುವಲಿ ಹೂವಿನ ಅರಳುವ ಚಂದ ಕಂಡೆ..

ನಿನ್ನ ಮೊಗದಲಿ ಅಪ್ಸರೆಯನು ಕಂಡೆ..

ಆದರೆ ಚೆಲುವೆ............






ಕನಸು ಕಂಡೆ ಎಂದು ತಿಳಿದದ್ದು ................ ಮಂಚದಿಂದ ದೊಬೊಲ್ ಎಂದು ಬಿದ್ದು ಸೊಂಟ ಮುರಿದಾಗಲೆ. .....ಥೋ..

ಚೆಲುವೆ ನೀನು....


ನಿನ್ನ ಕಂಗಳು
ನನ್ನ ದನಿಯಾಗಿ
ಹಾಡಿದೆ...

ನಿನ್ನ ಆ ಸ್ಪರ್ಶದಲಿ
ನಿನ್ನ ಆ ನೋಟದಲಿ
ಸುಳಿಮಿಂಚು ಮಿಂಚಿ ಓಡಿದೆ...

ನಿನ್ನ ಆ ತುಟಿಯ
ನಿನ್ನ ಆ ಮಾತು
ಮೈಮರೆಸಿದೆ...

ನಿನ್ನ ಆ ನಗುವಿನಲಿ
ನಿನ್ನ ಆ ಮೊಗದಲಿ
ಆ ಚಂದ್ರ ಹಾಡಿ ಕುಣಿದಂತಿದೆ....

ಚೆಲುವೆ ನೀನು...
ನನ್ನ ಗೊಂಬೆ ನೀನು...||

ಈ ಭಾವದ ಅರ್ಥ...


ನನ್ನ ಈ ಹೃದಯದಿ
ನಿನ್ನ ಸ್ವರ ಮಿಡಿತವು

ನನ್ನ ಈ ಕಿವಿಯಲಿ
ನಿನ್ನ ಮಾತಿನ ಪ್ರತಿಧ್ವನಿ

ನನ್ನ ಈ ಮನದಲಿ
ನಿನ್ನ ಕನಸಿನ ಕ್ಷಣಗಳು

ನನ್ನ ಈ ಕಣ್ಣಲಿ
ನಿನ್ನ ನಗುವಿನ ಮಿಂಚಿದು

ಹೇಳೆ ನೀ ಚೆಲುವೆ ನೀ
ಈ ಭಾವದ ಅರ್ಥವೇನೆ....!!!!


---------ರಘುರಾಮ್ ಜೋಶಿ---------

Friday, March 25, 2011

ಕಡಲಿನ ಕನಸು..


ಕಡಲಿನ ಮೀನಾಗಿ ಇರಬೇಕೆಂದೆ...
ಕಡಲೇ ಕಡೆಯಾಗಿ ಕಂಡಿತಲ್ಲ...
ಕನಸ ಕಂಡು ನನ್ನಲ್ಲೇ ಕೋಂದೆನಲ್ಲ..
ಉದುರುತಿದೆ ಮರದ ಎಲೆ
ಎಳೆತನದಲೆ ತರಗೆಲೆಯಾಗಿದೆ...

ಒಂದಿನ ಏಳುವ
ಮರುದಿನ ಬೀಳುವ
ನನಗಾಗಿ ನೋವನು ಸಹಿಸುವ
ಮನವೇ ಮನ್ನಿಸೇಯಾ? ನೀ ಎನ್ನ ಮನ್ನಿಸೆಯಾ? ||

ಮೋದಲೇ ತಡವಾಗಿ ನಡೆದೇ
ನಡೆದು ದಣಿವಾಗಿ ನಿಂದೆ
ನಿಂತು ನಿಂತಲ್ಲೇ ಉಳಿದೆ
ನಿಂತ ನೀರಾಗಿ ಹೋದೆನೇ..... ಮನವೇ....
ನನ್ನ ಮನವೇ ......
ಮಾತಾಡೆಯಾ ಈ ಮೌನವೇಕೆ?...

ಮೇಘದಂತೆ ಗುಡುಗಿ ಗುಡುಗಿ
ಹೆದರಿಸುವಂಥ ಮಿಂಚ ಕೂಡಿ
ಕಗ್ಗತ್ತಲ ಮಡುವಲ್ಲಿ ಆಸರೆಯೇ ಇರದ ಹಾಗೇ...
ಹಗೆ ತಿರಿಸುವ ಹಾಗೇಕೇ ಮಾಡುವೆಯೇ.....
ವಿಧಿಯೇ......
ನಾ ನಿನ್ನ ವೈರಿಯಾ?...
ಬಾಯಾರಿಸುವಷ್ಟಾದರೂ ಮಳೆಸುರಿಸಬಾರದಾ...?

ಬೆಳೆಯುವಾ ಬಳ್ಳಿಯಾಗಬೇಕೆಂದೇ...
ಹಾರೋ ಹಕ್ಕಿಯಾಗಬೇಕೆಂದೇ...
ಜಿಗಿಯೋ ಜಿಂಕೆಯಾಗಿ ಜೀಕಿ ಬಾನ ಮುಟ್ಟಬೇಕೆಂದೆ..
ಮನ್ನಿಸೆಯಾ ನನ್ನ ಮನವೇ...
ಮೊನಚಾದ ಮುಳ್ಳಾಗಿ...
ನಾ ನಿನ್ನ ಚುಚ್ಚುತಿಹೆನು...
ಸೋತು ಅಳುತಿಹೆನು...
ಮನ್ನಿಸೆಯಾ ನೀ ಎನ್ನ ಮನ್ನಿಸೆಯಾ
ಓ ನನ್ನ ಮನವೇ || ||


---------ರಘುರಾಮ್ ಜೋಶಿ---------

Wednesday, March 23, 2011

ಬಣ್ಣದ ಚಿಟ್ಟೆ


ಚಿಟ್ಟೆ ಚಿಟ್ಟೆ ಸಂಜೆಯಾಗಿರಲೀಗ
ಈಗಲಾದರೂ ಬರಬಾರದೇ....
ಮನದ ಮನೆಯ ಸೇರಬಾರದೇ...
ಈ ವೇಳೆಗಾಗಲೆ ಪಕ್ಷಿಗಳು ಕೂಡ ತಿರುಗಿ ಬರಲು..
ನೀನು ಬಾರಳೇಕೆ...... ನೀನು ಬಾರಳೇಕೆ...... ||

ಬಂದು ಈಗ ನನ್ನ ಸ್ಥಿತಿಯ ನೋಡಬಾರದೇಕೇ....
ನೋಡಿ ನನ್ನ ತಬ್ಬಿ ಬಿಗಿಯಾಗಿ ಅಳಬಾರದೇಕೆ....
ಎಲ್ಲ ತಾರೆಗಳೂ ನೋಡಿ ನನ್ನ
ಮರುಗಿ ಈಗ ಬೀಳ ಹೊರಟಿದೆ...
ಉಸಿರು ಬಿಗಿಯಾಗಿ ನಿಲ್ಲ ಹೊರಟಿದೆ...
ಈ ವೇಳೆಗಾಗಲೆ ಪಕ್ಷಿಗಳು ಕೂಡ ತಿರುಗಿ ಬರಲು..
ನೀನು ಬಾರಳೇಕೆ...... ನೀನು ಬಾರಳೇಕೆ...... ||

ನೀನಂತೂ ಹೋದೆ.......
ನಿನ್ನ ಮೈಯ ಬಣ್ಣ ಆಗ ಕೊಡಬಾರದಿತ್ತೆ....
ನನ್ನ ಈ ಜೀವನವೆಂಬ ಖಾಲಿ ಬಿಳಿ ಹಾಳೆಯಲಿ..
ಬರೆಯುತಿದ್ದೆ ನಿನ್ನ ಚಿತ್ರವ... ಬಳಿಯುತಿದ್ದೆ ನಿನ್ನ ಬಣ್ಣವ

ನೀನಿಲ್ಲದಿರೇ..... ನಿನ್ನ ಕಣ್ಣು ನನ್ನ ಕಾಡದಿರೇ......
ಕಳೆದ ಈ ಉಸಿರಿನಂತಿರುವ ಕ್ಷಣಗಳೇಕೆ ನನಗೆ....
ನಿನ್ನ ಹಣೆಯ ಮೇಲೆ ಆಗ
ಬೊಟ್ಟಿನಂತೆ ಇಟ್ಟ ಮುತ್ತು ಹಾಗೆಯೇ ಇದೆಯೇ....
ನಿನಗದು ನೆನಪಿದೆಯೇ....||

ಹೀಗೆ.... ಕಳೆಯದಿರಲಿ ನನ್ನ ಜಗವು ನೀನಿಲ್ಲದ ಹಾಗೆ...
ಹೇಗೆಂದರೆ, ಸಂತೆಯಲಿ.. ಪ್ರೀತಿಸಿದವರ ಕೈತಪ್ಪುವ ಹಾಗೇ....
ಈ ವೇಳೆಗಾಗಲೆ ಪಕ್ಷಿಗಳು ಕೂಡ ತಿರುಗಿ ಬರಲು..
ನೀನು ಬಾರಳೇಕೆ...... ನೀನು ಬಾರಳೇಕೆ...... ||

ಹುಣ್ಣಿಮೆ ಇದ್ದರೂ ಇಲ್ಲದಿರಲೂ ಕೂಡ
ನನ್ನ ಕಣ್ಣಿಗೆ ಕಾಣುವೆ ಈಗ ನೀನು ಚಂದಿರೆಯಾಗಿ
ದಿನವೂ ರಾತ್ರಿ ಕಾಡುವ ಹಾಗೆ ಅನಿಸಲೀಗ...
ನೀ ಬರುವೆಯಲ್ಲವೆ.........
ನಿನ್ನ ನೆನಪು ಮಾತ್ರ ಇರಲು ನನ್ನಲಿ..
ನೀ ಬರುವೆಯಲ್ಲವೇ......

ನನಗನಿಸಲೀಗ.... ಬಂದೇ ಬರುವೇ ನೀ... ನನಗಾಗಿ ಬರುವೆ..
ನನ್ನ ಹೃದಯದ ಬಡಿತ ಕೇಳಿ ಬರುವೆ...... || ||


---ರಘುರಾಮ್ ಜೋಶಿ---

ಪುಟ್ಟ ಪುಟಗಳು


ನೆನಪಿನ ಪುಟದಲಿ..
ನಗುವಿನ ಪುಳಕವ...
ನೆನೆಯೋ ರೋಮಾಂಚನ
ಏನೋ ರೋಮಾಂಚನ....

ಕಣ್ಣಾ ಹನಿಯ ಕವಿತೆ ಸಾಲ...
ನಾ ವಿವರಿಸಿ ಹೇಳಲಾ ||೧||

ಪದೇ ಪದೇ ಕಾಡೋ ನೋವು...
ಜೀವನದ ಪಾಠವೀಗ...
ನನ್ನ ಗೆಲಿಸಿದೆ...

ಅದೇ ಅದೇ ಮಾತ ಕೇಳಿ
ಮನವು ಕಲ್ಲು ಬೊಂಬೆಯಾಗಿ..
ಮೌನವಾಗಿದೆ..
ಕನಸಿನ ಪುಟಗಳು, ಖಾಲಿಯೇ ಆಗಲು...
ಕುಂಚ ಬೇಕಾಗಿದೆ
ಮನವು ಕುಂಚವಾಗಬೇಕಿದೆ||೨||

ಜೀವನದ ಬೇಗೆ ನೂರು
ನೂರು ದಾರಿ ನನ್ನ ನೋಡಿ
ನಕ್ಕು ಹೋಗಿದೆ...

ದಾರಿ ನೂರು ಆದರೇನು
ಮೋಡ ದಾರಿ ಕೇಳುವುದೇನು..
ಗಾಳಿ ಆಗು ನೀ....

ಹೆದರಿಸೋ ಇರುಳಲಿ
ಸಿಂಹವೇ ಆಗಿರು..
ಕಹಿಗಳೇ ಬೇಟೆಯು...

ಕಾಮನಬಿಲ್ಲಿನ... ಬಣ್ಣವೇ ಆಗಿರು
ನೀನೇ ಕುತೂಹಲ....
ಈ ಜಗದಿ
ನೀನೇನೇ ವಿಸ್ಮಯ...

ಹನಿಹನಿಯ ನೋವನು ಮರೆವ
ಕಥೆಗಳ ನಾ ಹೇಳಲ..... ||


ನೆನಪಿನ ಪುಟದಲಿ..
ನಗುವಿನ ಪುಳಕವ...
ನೆನೆಯೋ ರೋಮಾಂಚನ
ಏನೋ ರೋಮಾಂಚನ....

ಕಣ್ಣಾ ಹನಿಯ ಕವಿತೆ ಸಾಲ...
ನಾ ವಿವರಿಸಿ ಹೇಳಲಾ ||೩||


---ರಘುರಾಮ್ ಜೋಶಿ---