ನಸು ಬೆಳಕಿನ ರಾತ್ರಿಯ ಸಮಯ ಕೈಯಲ್ಲಿಯ ಗಡಿಯಾರ ಟಿಕ್.......ಟಿಕ್...... ಎಂದು ಚಲಿಸುತ್ತಲೇ ಇತ್ತು. ನಿಶ್ಯಬ್ಧವಾಗಿರೋ ಆ ರಾತ್ರೀಲಿ ಸ್ಥಿರವಾಗಿ,ಉಸಿರೂ ಕೂಡ ಕೆಳದಿರುವಷ್ಟು ಮೌನವಾಗಿ ಕುಳಿತಿರೋ ಆ ಹೃದಯ ತೇವವಾಗಿತ್ತು.
ಅದೆಕೋ ಕಾಣೆ ಅದೊಂದು ಹುಣ್ಣಿಮೆಯ ರಾತ್ರಿ, ದುಂಡನೆಯ ಚಂದಿರ ಕಣ್ಣು ಕುಕ್ಕುವಂತೆ ಕುಣಿಯುತ್ತಾ ನಗುತ್ತಿದ್ದ. ಅಳುವವರನ್ನು ನೋಡಿ ನಗುತ್ತಿದ್ದಾನೆನೋ ಅನಿಸುತ್ತೆ. ತಣ್ಣನೆಯ ಗಾಳಿ ತನ್ನಲ್ಲಿಯೇ ಮಾತನಾಡುತ್ತಿರುವಂತೆ ಭಾಸವಾಗುತ್ತಿತ್ತು.
ಅದೊಂದು ಜೀವ.. ನಿರ್ಜೀವದ ಹಾಗೆ. ಬೆಳ್ಳನೆಯ ಸುಣ್ಣದ ಗೋಡೆಗೆ ಒರಗಿ ಮಿನುಗುವ ಇನ್ನೊಂದು ಲೋಕದಂತೆ ಕಾಣುವ, ರಾತ್ರಿಯ ರಾಜನನ್ನು ದಿಟ್ಟಿಸಿತ್ತು. ಹೃದಯದ ಮಾತುಗಳು ಮನದಲ್ಲಿ ಸಮುದ್ರದ ಅಲೆಗಳ ಭೋರ್ಗರೆತದ ಶಬ್ದದಂತೆ ಧುಮ್ಮಿಕ್ಕುತ್ತಿದ್ದವು. ಬಹುಶಃ ಅಲ್ಲಿ ಅದೊಂದೇ ಧ್ವನಿ ಇರಬಹುದು.
ಹಿಂದಿನ ಸಾಲು ಸಾಲಂತಿರುವ ಸೋಲಿನ ನಿರಾಸೆಗಳ ಗೆರೆದಾಟಿ, ಮುಂದಿನ ಯಾವುದೋ ಗೆಲುವಿನ ನಿರೀಕ್ಷೆಯಲ್ಲಿರುವಂತ್ತಿತ್ತು. ಕಣ್ಣ ಹನಿಗಳು ಬೇಸರವೆಂಬ ಬೇಲಿ ದಾಟಿ ಮುದ ನೀಡುವ ಬೆಳಕನ್ನು ಸೇರುವ ಕಾತರದಲ್ಲಿತ್ತೆನೋ..., ಹಾಲು ಮೊಗದ ಚಂದಿರನನ್ನು ಕಣ್ಣುಗಳೆಂಬ ಪುಟ್ಟ ಮನೆಯಿಂದ ರೆಪ್ಪೆಗಳೆಂಬ ಕಿಟಕಿಯ ಜೊತೆಗೆ ನೊಡುತ್ತಿತ್ತು. ಆ ರಾತ್ರಿಯಲಿ ಹೊಳೆಯುತ್ತಿರುವುದು ಎರಡೇ... ಮೊದಲನೆಯದು ಚಂದಿರ, ಇನ್ನೊಂದು ಕದಡಿದ ಕಣ್ಣ ಹನಿಗಳು. ಆದರೆ ಆ ಹನಿಗಳಲ್ಲಿಯೂ ಕೂಡ ಗೆಲುವಿನ ಚಂದಿರನ ಬಿಂಬ ಕಾಣುತ್ತಿತ್ತು. ಬೆಳಕೆಂಬುದು ಕಾಣುವುದು ಕತ್ತಲೆಯಲ್ಲಿದ್ದಾಗ ಮಾತ್ರ.
ಆಗ.....ನೆನಪಿನ ನೆಪದಲ್ಲಿ ನಯನವು ನೆಂದಿತ್ತು, ನಾಡಿ ನುಡಿಯುತ್ತಿತ್ತು, ಮನವು ಆಲಿಸಿತ್ತು. ಪಾಪ, ಆ ಜೀವಕೆ ಭವಿಷ್ಯದ ಗೆಲುವಿನ ಕನಸಿನ ನಿರ್‍ಈಕ್ಷೆ. ಮನದ ಮುಗಿಲಲಿ ಭಾವನೆಯ ಕಾರ್ಮೋಡ ತುಂಬಿತ್ತು. ಆಗಾಗ ನಡುಗುವಂಥಹ ಗುಡುಗು, ಸಿಡಿಲುಗಳು ಮನದಲ್ಲಿ ಅಪ್ಪಳಿಸುತ್ತಿತ್ತು. ಭಾವನೆಯೆಂಬ ಮೋಡವು ಯಾವ ಪರಿ ಹೆಪ್ಪುಗಟ್ಟಿತೆಂದರೆ....ಮಳೆ ಬರುವ ಸಮಯ ತುದಿಗಾಲಲ್ಲಿ ನಿಂತಿತ್ತು. ಆ ತೇವವಾದಂಥಹ ಕಣ್ಣುಗಳ ಭಾವವು ಪೂರ್ತಿಯಾಗಿ ಹಿಂಡುವಂತಿತ್ತು.
ಹೆಪ್ಪುಗಟ್ಟಿದ ಮೋಡವು ತಂಪಾಗಿ ಮಳೆ ಹನಿಯಾಗಿ ರಭಸದಿಂದ ಧುಮುಕಿದೆ. ಕಣ್ಣ ಹನಿಯು ರೆಪ್ಪೆಯಿಂದ ಬಾಹ್ಯಕ್ಕೆ ಜಿಗಿದಿದೆ. ಭಾವನೆಯೆಂಬ ಕಟ್ಟೆ ಒಡೆದಿದೆ. ಬೇಸರದ, ನಿರಾಸೆಯ ಹನಿಗಳು ತೋಚಿದ ಕಡೆಗೆ ಮೃದು ಧ್ವನಿಯಿಂದ ಹರಿಯುತ್ತಿದೆ. ಸ್ವಲ್ಪ ಸಮಯ ಹಾಗೆಯೇ ಸರಿದಿದೆ. ಸಾಗರದಲೆಯಂಥ ಶಬ್ದವು ಏಕಾಂತ ಬಯಸುವ ಹಾಗೆ ನಿಧಾನವಾಗಿ ದೂರ ಸರಿಯುತಿದೆ. ಚಂದಿರನ ನಡಿಗೆ ಸಾಗುತ್ತಲೇ ಇರಲು, ಸಮಯ ಮೀರುತಿದೆ. ಮನದ ತುಂಬೆಲ್ಲ ಹರಡಿದ್ದ ನಿರಾಸೆಯೆಂಬ ಮಂಜುಗಡ್ಡೆಯೆಲ್ಲ ಕರಗಿ, ನೀರಾಗಿ ಹರಿಯಲು ಶುಭ್ರವಾಗಿದೆ, ಖಾಲಿಯಾಗಿದೆ.... ಆ ಮನವು.ಮತ್ತೆ ಮೊದಲಿಗಿಂತ ಇಮ್ಮಡಿಯಾದ ಮೌನ ಆವರಿಸಿರಲು, ನಿರಾಸೆಯ ಭಾವನೆಯೆಂಬ ಕಾರ್ಮೊಡವು ಅಚ್ಚು ಬಿಳಿಯಾಗಿದೆ. ಮನದ ತುಂಬೆಲ್ಲ ದುಂಬಿಯಂತೆ ಸುಳಿದಾಡಿದ ಪ್ರಶ್ನೆಗೆ ಮಕರಂದದಂಥ ನೆಮ್ಮದಿಯ ಸವಿ ಸಿಕ್ಕಿದೆ. ಅದೇಕೋ ಕಾಣೆ ತನುವು-ಮನವು ಹಗುರಾಗಿ, ನಿಟ್ಟುಸಿರು ಬಿಡಲು, ಹೊಸ ಜೀವನದ ಹಂಬಲ, ಉತ್ಸಾಹ-ಆತ್ಮಸ್ಥೈರ್ಯವೆಂಬ ಬೆಂಬಲ. ಗಮನವು ಗಡಿಯಾರದ ಮೇಲೆ ಹೋಗಲು ಮತ್ತೊಮ್ಮೆ, ಒಮ್ಮೆಲೆ ನಿದ್ರೆಯಿಂದ್ದೆದ್ದಂತೆ ಮೈ ಕೊಡವಲು ಮೂಡಿದೆ ವಿಶ್ವಾಸವು ಆ ಎದೆಯಲ್ಲಿ. ಹಿಂದಿನ ಘಟನೆಯು ಆವಿಯಾಗಲು ಹೊಸ ಚೇತನದೊಡನೆ, ಶಿವನ ನೆನೆದು ಮತ್ತೆ ಹೊರಡಲು ಹೊಸ ದಾರಿಯ ಜೊತೆಗೆ. ಭೂಮಿ ಬರಡಾದಾಗ ಮಾತ್ರ ನೀರಿನ ಹನಿಯ ಮಹತ್ವ ಗೊತ್ತಗಲ್ಪಡುವುದು. ಆ ಭೂಮಿಗೆ ಹೊಸ ಜೀವನದ ಜೀವ ಸೆಲೆಯಂಥ ಮೋಡ ಕರಗಿ ಮಳೆಯ ಹನಿಯು ಸ್ಪರ್ಷಿಸುವುದು ಅಬ್ಬರದ, ಭಯಂಕರವಾದ ಗುಡುಗು, ಸಿಡಿಲಿನ ನಂತರವೇ ಅಲ್ವ?......
ಒಂದು ವಿಷಯವಂತೂ ಸ್ಪಷ್ಟವಾಗುವುದೆನೆಂದರೆ, ಜೀವನವೆಂಬ ಸುಂದರ, ಕುತೂಹಲದ ಕಥೆಯ ಪುಸ್ತಕದಲ್ಲಿ, ಪ್ರತಿಯೊಂದು ಕ್ಷಣವು ಅಮೋಘ ತಿರುವಿನಿಂದ ಕೂಡಿದೆ. ಅದೆನೆಂದು ಆ ಸಂದರ್ಭದಲ್ಲಿ ತೋಚದಿರುವುದು ಸಹಜಜವಾದರೂ.... ಮುಂದಿನ ಕೌತುಕದ ಕ್ಷಣಗಳು ತಿಳಿಯುವುದು ಪುಟ ತಿರುವಿದಾಗ ಮಾತ್ರ ಅಲ್ವ... ಒಮ್ಮೆ ಕುತೂಹಲದಿಂದ ತಿರುವಿಹಾಕಿ ಬಂದಿದ್ದನ್ನು ಎದುರಿಸಿದರೆ ಬಾಳು ಬಂಗಾರವಾದೀತು.... ಇದು ಆ ಜೀವದ ಮನಸ್ಸಿಗೆ ತಿಳಿದಿತ್ತು ಕೂಡ. ಮೈ ಕೊಡವಿ ಹೊರಟಾಗ ಅಲ್ಲೊಂದು ಧೃಡ ನಿರ್ಧಾರವಿರಬಹುದು... ಆದರೆ ಆ ಮನದ ಬಲವಾದ ನಂಬಿಕೆಯೆಂದರೆ.............
"ಇಲ್ಲಿ... ಈ ಜೀವನದಲ್ಲಿ ಅಪಘಾತ ಅಥವಾ ಆಕಸ್ಮಿಕ ಎನ್ನುವುದೇ ಇಲ್ಲ. ಪ್ರತಿಯೊಂದು ಬೇಕೆಂತಲೇ ಆಗುವುದು. ಆಗುವುದೆಲ್ಲ ಒಳ್ಳೆಯದಿಕ್ಕೆ..... ಸರಿ ಅಲ್ವ...?"